36

ಹೋಲಿ(ಹೋಳಿ) ಪ್ರಶ್ನಾವಳಿ

ನಮ್ಮ ಧರ್ಮಶಾಸ್ತ್ರ ಗ್ರಂಥಗಳನ್ನು ಸಂಪಾದಿಸಿಕೊಟ್ಟ, ಮಹಾಮಹೋಪಾಧ್ಯಾಯ ಡಾ|| ಪಿ. ವಿ. ಕಾಣೆಯವರು ಹೇಳುವಂತೆ, ವಸಂತ ಋತುವಿನ ಹೋಲಿ ಹಬ್ಬವು ಬಹಳ ಪುರಾತನವಾದುದು. ಬಣ್ಣದೋಕುಳಿಯ ಹೋಲಿಯ ಆಚರಣೆ ಹಾಗೂ ಹೋಲಿಕಾ ದಹನದ ಉಲ್ಲೇಖಗಳನ್ನು ನಮ್ಮ ಹಲವು ಪುರಾಣಗಳಲ್ಲಿ ಹಾಗೂ ಶಿಲ್ಪಗಳಲ್ಲಿ ಕಾಣಬಹುದು. ಹೋಲಿ ಆಚರಣೆಯು ಹೇಗೆ ಸಾಮುದಾಯಿಕ ಭಾವೈಕ್ಯತೆ ಹಾಗೂ ಸಾಮ್ರಸ್ಯಗಳ ಸಂಕೇತವೆಂದು ಈ ಪ್ರಶ್ನಾವಳಿಯು ಮನಗಾಣಿಸುತ್ತದೆ. ಈ ಪ್ರಶ್ನಾವಳಿಯ ಆಕರ ಸಾಮಗ್ರಿಗಳು ನಿತ್ಯಾನಂದ ಮಿಶ್ರರ ಫಸ್ಟ್ ಪೋಸ್ಟ್ ನಲ್ಲಿ ಮುದ್ರಿತವಾದ ಲೇಖನ ಹಾಗೂ ಲಿಯೋನಾ ಆಂಡರ್ಸನ್ ಅವರ ‘spring festivals’ ಪಸ್ತಕ.

1. ಹೋಲಿ ಆಚರಣೆಗೆ ಸಂಬಂಧಿಸಿದಂತೆ ನಮ್ಮ ಪುರಾಣಗಳಲ್ಲಿ ಹೋಲಿಕಾ ಹಾಗೂ ಪ್ರಹ್ಲಾದರ ಕಥೆಯ ಉಲ್ಲೇಖವನ್ನು ಕಾಣಬಹುದು. ಇದಲ್ಲದೆ ಮತ್ತೂ ಒಂದು ಕಥೆಯಿದೆ. ಯಾವುದದು?

2. ಉತ್ತರ ಭಾರತದ ಹಲವು ಮಂದಿರಗಳಲ್ಲಿ ಹಾಗೂ ಗರ್ಗ ಸಂಹಿತೆಯಲ್ಲಿ ವರ್ಣಿಸಿರುವಂತೆ ಯಾವ ದಿವ್ಯ ದಂಪತಿಗಳ ಸಂಗತಿಗಳು ಆಚರಣೆಯಲ್ಲಿದೆ?

3. ಮಹಾಕವಿ ಕಾಳಿದಾಸನು ವರ್ಣಿಸಿರುವಂತೆ, ಬಂಗಾಳ, ಅಸ್ಸಾಂ ಹಾಗೂ ಒಡಿಶಾದಲ್ಲಿ ಇಂದಿಗೂ ದೋಲ್-ಜಾತ್ರೆ (ಹೋಲಿ)ಯನ್ನು ಆಚರಿಸುತ್ತಾರೆ. ಅಲ್ಲಿನ ಆಚರಣೆಗಳ ಮುಖ್ಯ ಚಟುವಟಿಕೆ ಯಾವುದು?

4. ಕರ್ನಾಟಕದ ಚೆನ್ನಕೇಶವ ದೇವಾಲಯದ ಭಿತ್ತಿಯೊಂದರಲ್ಲಿ ಪರಿಚಾರಿಕೆಯೊಬ್ಬಳು ಓಕುಳಿಯ ಪಿಚಕಾರಿ ಹಿಡಿದು ಸಂಭ್ರಮಿಸುತ್ತಿರುವ ಶಿಲ್ಪದ ಚಿತ್ರವಿದಾಗಿದೆ. ದೇಗುಲನಿರ್ಮಾಣದಲ್ಲಿ ಸಿದ್ಧಹಸ್ತರೆನಿಸಿದ ಯಾವ ರಾಜವಂಶದವರು ಈ ದೇಗುಲವನ್ನು ಕಟ್ಟಿದರು?

5. ‘ಎಲ್ಲ ದಾರಿ ಹೋಕರ ಮೇಲೂ, ರಾಜದಂಪತಿಗಳ ಮೇಲೂ ಕೇಸರಿ ಬಣ್ಣದೋಕುಳಿಯನ್ನು ಚುಮುಕಿಸುತ್ತಿದ್ದರು’ ಎಂದು ಸಾ.ಶ. ಹದಿನೈದನೇ ಶತಮಾನದಲ್ಲಿ ದಕ್ಷಿಣ ಭಾರತಕ್ಕೆ ಬಂದ ಒಬ್ಬ ಪ್ರವಾಸಿಯು ಯಾವ ಸಾಮ್ರಾಜ್ಯದ ಬಗ್ಗೆ ಹೇಳಿದನು?

6. ಹೋಲಿ ಹಬ್ಬದ ಬಗ್ಗೆ ಮೊಘಲ್ ಸಾಮ್ರಾಜ್ಯದ ಕಡೆಯ ಸಮ್ರಾಟನು ಒಂದು ವಿಲಾಸಮಯವಾದ ಹಾಡನ್ನು ರಚಿಸಿರುವನು. ಅವನು ಯಾರು?

7.ಜೈಮಿನಿ ಮಹರ್ಷಿಗಳ ಮೀಮಾಂಸೆಯನ್ನು ಕುರಿತ ಶಬರ ಭಾಷ್ಯವು, ಹೋಲಿ ಹಬ್ಬವು ಬೃಹತ್ ಭಾರತದ ಯಾವ ಭಾಗದಲ್ಲಿ( ಇಂದು ಅಲ್ಲಿ ಈ ಆಚರಣೆ ಹೆಚ್ಚಾಗಿ ಕಾಣದು.) ಅಸ್ತಿತ್ವಕ್ಕೆ ಬಂದಿತೆಂದು ಉಲ್ಲೇಖಿಸುತ್ತದೆ?

8. ವಸಂತೋತ್ಸವದ ಸಮಯದಲ್ಲಿ ಜನಸಾಮಾನ್ಯರು ‘ಉದಕಕ್ಷ್ವೇಡಿಕಾ'(ನೀರು ಚುಮಿಕಿಸುವುದು) ಮತ್ತು ‘ಶೃಂಗಕ್ರೀಡಾ’ ಎಂಬ ಕ್ರೀಡೆಗಳಲ್ಲಿ ತೊಡಗಿಕೊಳ್ಳುತ್ತಿದ್ದರು ಎಂದು ಕಾಮಸೂತ್ರವು ವಿವರಿಸುತ್ತದೆ. ‘ಶೃಂಗ’ ಎಂದರೇನು?

9. ಸಾತವಾಹನರ ದೊರೆಯಾದ ಹಾಲ ಮಹಾರಾಜನು, ಹೋಲಿ ಆಚರಣೆಗಳ ವರ್ಣನೆಯನ್ನೊಳಗೊಂಡ 700 ಕವಿತೆಗಳ ಸಂಕಲನವಾದ ‘ಗಾಹಾ ಸತ್ತಸಯೀ’ ಯನ್ನು ರಚಿಸಿದನು. ಇದು ಯಾವ ಭಾಷೆಯಲ್ಲಿದೆ?

10. ಸಾ.ಶ. ಏಳನೆಯ ಶತಮಾನದಲ್ಲಿ ಸಂಸ್ಕೃತದಲ್ಲಿ ರಚಿತವಾದ ರತ್ನಾವಳಿ ನಾಟಕದಲ್ಲಿ ವಸಂತೋತ್ಸವದ ವರ್ಣನೆಗಳು ಇಂದಿನ ಹೋಲಿ ಆಚರಣೆಗಳನ್ನು ಹೋಲುತ್ತವೆ. ಈ ನಾಟಕವನ್ನು ರಚಿಸಿದ ವಿದ್ವಾಂಸ ಸಮ್ರಾಟನಾರು?

11. ಹೋಲಿಯು ಅರಮನೆಯ ಹಬ್ಬವೂ ಆಗಿದ್ದಿತು. ಮೊಘಲ್ ಸಮ್ರಾಟನೊಬ್ಬನು ಹೋಲಿ ಆಡುತ್ತಿರುವ ವರ್ಣಚಿತ್ರಗಳಿವೆ. ಅವನು ಯಾರು?

12. ವೇದ ವಾಙ್ಮಯದಲ್ಲಿ ‘ಹೋಲ್ಲಾಕಾ’ ಎಂಬ ಉಲ್ಲೇಖವಿದೆ. ‘ಹು’ ಎಂಬ ಧಾತುವಿನಿಂದ ಉದ್ಭವಿಸಿರುವ ಈ ಪದದ ಅರ್ಥವೇನು?

ನಿರ್ಗಮನ

How did you like this quiz?

Get quiz links

We will send you quiz links at 6 AM on festival days. Nothing else 

Opt In