ಡೆಕ್ಕನ್ ಎಂಪೈರ್ಸ್
ಯುಗಾದಿ ಹಾಗೂ ಗುಡಿಪಡ್ವಾ ಪರ್ವಗಳು ದಾಕ್ಷಿಣಾತ್ಯರಲ್ಲಿ ಹೊಸ ವರ್ಷದ ಆರಂಭವನ್ನು ಸೂಚಿಸುತ್ತವೆ. ಮಹಾರಾಷ್ಟ್ರ, ಕರ್ನಾಟಕ, ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಹೊಸ ವರ್ಷವನ್ನು ಹೀಗೆ ಆಚರಿಸಲಾಗುತ್ತದೆ. ಈ ರಸಪ್ರಶ್ನೆಯಲ್ಲಿ, ಭಾರತದ ದಕ್ಷಿಣ ಭಾಗಗಳನ್ನು ಆಳಿದ, ಗತಿಸಿದ ಕಾಲದಲ್ಲಿ ನಾವುಗಳು ಮರೆತ ಅತಿ ಪ್ರಭಾವಶಾಲಿ ಅರಸೊತ್ತಿಗೆಗಳ ಬಗ್ಗೆ ತಿಳಿದುಕೊಳ್ಳೋಣ. ದಕ್ಷಿಣವನ್ನು ಆಳಿದ ಅತ್ಯಂತ ಪ್ರಾಚೀನ ರಾಜವಂಶ ಯಾವುದು? ಎಲ್ಲೋರ ಗುಹ್ಯ ದೇವಾಲಯಗಳ ನಿರ್ಮಾತ್ರರು ಯಾರು? ಹಿಂದೂ ದೇವಾಲಯದ ತೂಗುತೊಟ್ಟಿಲು ಎಂದು ಯಾವ ಜಾಗವು ವಿಖ್ಯಾತವಾಗಿದೆ? ಅದರ ಕೀರ್ತಿ ಯಾರಿಗೆ ಸಲ್ಲುತ್ತದೆ? ಈ ವಿಚಾರಗಳನ್ನು ತಿಳಿಯಲು ಉತ್ಸುಕರೇ ? ಬನ್ನಿ….
5 ಅದೃಷ್ಟಶಾಲಿ ರಸಪ್ರಶ್ನೆ ಸ್ಪರ್ಧಿಗಳು ಪುಸ್ತಕವನ್ನು ಗೆಲ್ಲುತ್ತಾರೆ, Essential Ramayana.
ಕನ್ನಡಾನುವಾದ : ಶ್ರೀಮತಿ ಆಶಾ ಗಣಪತಿ
ಅಶೋಕ ಪ್ರಿಯದರ್ಶಿಯ ಶಾಸನಸ್ತಂಭವು ನಮ್ಮ ರಾಷ್ಟ್ರಚಿಹ್ನವಾಗಿ ಬೆಳಗುತ್ತದೆ. ಅಂತೆಯೇ ತೆಳಂಗಾಣರಾಜ್ಯದ ಚಿಹ್ನವಾಗಿರುವುದು ಒಂದು ದೇವಾಲಯದ ತೋರಣದ್ವಾರ. ಇದನ್ನು ಕಟ್ಟಿಸಿದ ರಾಜವಂಶ ಯಾವುದು?
ದಕ್ಷಿಣಾಪಥದ ಪೂರ್ವ ಕರಾವಳಿಯನ್ನು ಹನ್ನೊಂದನೆಯ ಶತಮಾನದಿಂದ ಹದಿನಾಲ್ಕನೆಯ ಶತಮಾನಗಳ ವರೆಗೆ ಆಳಿದವರು ಬಲಿಷ್ಠರಾದ ಕಾಕತೀಯರು. ಈ ಅರಸರ ಮೂಲಸ್ಥಾನ ಓರುಗಲ್ಲು ಅಥವಾ ಇಂದಿನ ವಾರಂಗಲ್. ಈ ನಗರಕ್ಕೆ ಮೂರು ಸುತ್ತಿನ ಕೋಟೆಯಿದ್ದಿತು. ಒಳಗಣ ಮೂರನೆಯ ಸುತ್ತನ್ನು ಓರುಗಲ್ಲಿನ ಕೋಟೆಯೆಂದು ಗುರುತಿಸುತ್ತಾರೆ; ಇದರ ಅಂತರ್ವೃತ್ತ ಸುಮಾರು ಒಂದು-ಕಾಲು ಕಿ.ಮೀ. ಅಗಲವಿದೆ. ಈ ನಗರಗರ್ಭದಲ್ಲಿ ಶಿವಾಲಯವಿದ್ದು, ಈಗ ದುರ್ದೈವದಿಂದ ಒಡೆಯಲ್ಪಟ್ಟಿದೆ. ಈ ದೇವಾಲಯಕ್ಕೆ ನಾಲ್ಕು ದಿಕ್ಕುಗಳಲ್ಲಿಯೂ ನೆಟ್ಟಿರುವ ತೋರಣದ್ವಾರಗಳು ಮಾತ್ರ ನಿಂತಿವೆ. ಇವು ಸುಮಾರು ಹತ್ತು ಮೀ. ಎತ್ತರವಿವೆ. ಇವುಗಳಲ್ಲಿ ಎದ್ದುತೋರುವಂತೆ ದೇವತಾಶಿಲ್ಪಗಳು ಕಾಣದಿರುವುದರಿಂದ ಆಕ್ರಮಣಕಾರಿಗಳ ಕಣ್ಣಿಗೆ ಇವು ಬೀಳಲಿಲ್ಲವೇನೋ! ಚಾರ್ಮಿನಾರಿನೊಂದಿಗೆ ಈ ಒಂದು ತೋರಣದ್ವಾರವನ್ನೂ ತೆಲಂಗಾಣರಾಜ್ಯವು ಅಸ್ತಿತ್ವಕ್ಕೆ ಬಂದ ನಂತರ ರಾಜ್ಯಚಿಹ್ನೆಯಾಗಿ ಹೊರತರಲಾಯಿತು. ತೆಲಂಗಾಣ ರಾಜ್ಯೋತ್ಸವ, ಜೂನ್ ೨, ೨೦೨೪ ರಂದು ಈ ರಾಜ್ಯಚಿನ್ಹೆ ಅನಾವರಣಗೊಳ್ಳಬೇಕಿದ್ದಿತು. ಹೊಸದಾಗಿ ಆಯ್ಕೆಯಾದ ಕಾಂಗ್ರೆಸ್ ಪಕ್ಷ ಇದನ್ನು ತಡೆಹಿಡಿಯಿತು.
ಮೂಲ: ಜಾರ್ಜ್ ಮಿಶೆಲ್, ಸತರ್ನ್ ಇಂಡಿಯಾ
ಐಹೊಳೆ, ಬಾದಾಮಿ, ಮತ್ತು ಪಟ್ಟದಕಲ್ಲು ಈ ಮೂರೂ ನಗರಗಳಲ್ಲಿ ರಾಜಧಾನಿಗಳನ್ನು ಸ್ಥಾಪಿಸಿ, ಶಿಲ್ಪಕಲೆಯಲ್ಲಿಯೂ ಮಹತ್ತರವಾದ ಛಾಪನ್ನು ಮೂಡಿಸಿದ ರಾಜವಂಶ ಯಾವುದು?
ವಾತಾಪಿಪುರವನ್ನು(ಇಂದಿನ ಬಾದಾಮಿ) ಕೇಂದ್ರವಾಗಿರಿಸಿಕೊಂಡು ಆರನೆಯ ಶತಮಾನದ ಮಧ್ಯಕಾಲದಲ್ಲಿ ಉದಿಸಿದವರು ಚಾಲುಕ್ಯವಂಶದ ಅರಸರು. ವಿಕ್ರಮಿಗಳಾದ ಇವರ ನೇತೃತ್ವದಲ್ಲಿ ಚಾಲುಕ್ಯಮಂಡಲವು ವೇಗದಲ್ಲಿಯೇ ಸೀಮಾವೃದ್ಧಿಯನ್ನು ಕಂಡಿತು. ಈ ಸಾಧನೆಗೆ ಕಲಶವಿಟ್ಟಂತೆ ಇರುವುದು ಚಾಲುಕ್ಯರ ದೇವಾಲಯ ನಿರ್ಮಾಣ ಕೌಶಲ. ಐಹೊಳೆ, ವಾತಾಪಿ, ಮತ್ತು ಪಟ್ಟದಕಲ್ಲು ಮೂರೂ ಭಾರತೀಯ ದೇವಾಲಯನಿರ್ಮಾಣದ ವಿದ್ಯೆಯ ತೊಟ್ಟಿಲು ಎಂದರೆ ಅತಿಶಯೋಕ್ತಿಯಲ್ಲ. ಉತ್ತರದ ನಾಗರ, ದಕ್ಷಿಣದ ದ್ರಾವಿಡ, ಮತ್ತು ವೇಸರ(ಮಿಶ್ರ ಶೈಲಿ) – ಈ ಮೂರೂ ಪ್ರಕಾರಗಳ ದೇವಾಲಯಗಳ ನಿರ್ಮಾಣಸೂಕ್ಷ್ಮಗಳ ಹುಟ್ಟು, ಪರಿಷ್ಕಾರ, ಮತ್ತು ಸ್ಥಾಪನೆಗಳನ್ನು ನಾವು ಈ ಮೂರು ಪಟ್ಟಣಗಳ ಅವಶೇಷಗಳಲ್ಲಿ ಕಾಣಬಹುದು. ಚಾಲುಕ್ಯರ ಅರಸರಲ್ಲಿಯೇ ಸುಪ್ರಸಿದ್ಧನಾದವನು ಇಮ್ಮಡಿ ಪುಲಕೇಶಿ. ಈತನ ಪರಾಕ್ರಮ ಬನವಾಸಿಯ ಕದಂಬರನ್ನೂ ಕರಾವಳಿಯ ಆಲುಪರನ್ನೂ ಮೈಸೂರಿನ ಗಂಗರನ್ನೂ ಬಗ್ಗು ಬಡಿದಿತ್ತು. ಇಷ್ಟಕ್ಕೇ ತೃಪ್ತಿಗೊಳ್ಳದ ಪುಲಕೇಶಿಯು ಪೂರ್ವಕ್ಕೆ ಹೊಕ್ಕು ದಕ್ಷಿಣಕೋಸಲ ಮತ್ತು ಕಲಿಂಗಮಂಡಲಗಳನ್ನು ತನ್ನ ಅಧೀನಕ್ಕೆ ತಂದುಕೊಂಡನು. ನರ್ಮದಾತೀರದಲ್ಲಿ ಉತ್ತರಾಪಥಕ್ಕೆ ಸ್ವಾಮಿಯಾಗಿದ್ದ ರಾಜಾಧಿರಾಜ ಶೀಲಾದಿತ್ಯ ಹರ್ಷವರ್ಧನನನ್ನೂ ಗೆದ್ದಿದ್ದನೆಂದು ತಿಳಿಯುತ್ತದೆ. ಪುಲಕೇಶಿಯ ಇದೇ ಮೊದಲಾದ ಪರಾಕ್ರಮಗಳ ದಾಖಲೆ ಐಹೊಳೆಯ ಒಂದು ಜಿನಾಲಯದ ಭಿತ್ತಿಯಲ್ಲಿ ಕೆತ್ತಲ್ಪಟ್ಟ ಸಂಸ್ಕೃತಶಾಸನದಿಂದ ತಿಳಿದುಬರುತ್ತದೆ. ಕಾಳಿದಾಸ-ಭಾರವಿಗಳಿಗೆ ತನ್ನನ್ನು ಹೋಲಿಸಿಕೊಳ್ಳುವ ಒಳ್ಳೆಯ ಕವಿ ರವಿಕೀರ್ತಿ ಬರೆದ ಈ ಶಾಸನದಲ್ಲಿ ‘ಜಯತಿ ಭಗವಾನ್ ಜಿನೇಂದ್ರಃ’ ಎಂಬುದೇ ಆದಿಮವಾಕ್ಯ. ಇಂದಿಗೂ ಜೈನಬಂಧುಗಳು ‘ಜಯ ಜಿನೇಂದ್ರ’ ಎಂದು ಮಾತಿನಾರಂಭದಲ್ಲಿ ಹೇಳುವುದನ್ನು ನಾವು ಗಮನಿಸಬಹುದು. ಪುಲಕೇಶಿಯ ವಂಶಾವಳಿಯನ್ನೂ ಸಾಧನೆಗಳನ್ನೂ ಆ ಶಾಸನವು ಬಿತ್ತರಿಸುತ್ತದೆ. ಅಷ್ಟೇ ಅಲ್ಲದೆ ಈ ಶಾಸನದಲ್ಲಿ ಕೊಟ್ಟಿರುವ ಕಾಲಮಾನದ ವಿವರಗಳು ಮಹಾಭಾರತಯುದ್ಧವನ್ನು ಸಾಮಾನ್ಯಪೂರ್ವಶಕೆ ೩೦೦೦ಕ್ಕೆ ನಿಶ್ಚಯ ಮಾಡಲು ಸಹಾಯ ಮಾಡುತ್ತದೆ. ಸಾ.ಶ. ೬೪೨ರಲ್ಲಿ ಪುಲಕೇಶಿಯು ಪಲ್ಲವ ನರಸಿಂಹವರ್ಮನ ಆಕ್ರಮಣಕ್ಕೆ ತತ್ತರಿಸಿದ ವಾತಾಪಿಯಲ್ಲಿಯೇ ಮಡಿದನು. ನರಸಿಂಹವರ್ಮನಿಗೆ ಈ ವಿಕ್ರಮದಿಂದ ವಾತಾಪಿಕೊಂಡನ್ ಎಂಬ ಬಿರುದೂ ಸಂದಿತು. ಎಂಟನೆಯ ಶತಮಾನದ ಮಧ್ಯಕಾಲಕ್ಕೆ ಚಾಲುಕ್ಯಾನ್ವಯದ ಮುಖ್ಯವಾಹಿನಿಯಾದ ವಾತಾಪಿಯ ಮನೆತನವು ‘ಪೃಥ್ವೀವಲ್ಲಭ’ ಎಂದು ಬಿರುದನ್ನು ಗಳಿಸಿದ್ದ ರಾಷ್ಟ್ರಕೂಟರ ದಂತಿದುರ್ಗನಿಗೆ (ಈತನನ್ನು ಇಮ್ಮಡಿ ದಂತಿವರ್ಮನೆಂದೂ ಕೆಲವರು ಹೇಳುವುದುಂಟು) ಮಣಿಯಿತು. ಆ ಬಳಿಕ ಮಾನ್ಯಖೇಟದ ರಾಷ್ಟ್ರಕೂಟರು ಧಾರಾವರ್ಷ, ಪ್ರಭೂತವರ್ಷ, ಅಕಾಲವರ್ಷ, ಮತ್ತು ಅಮೋಘವರ್ಷರ ಸಾಮ್ರಾಜ್ಯಕಾಲದಲ್ಲಿ ಇಡಿಯ ದಕ್ಷಿಣಾಪಥವನ್ನು ಗೆದ್ದು ಗಂಗಾತೀರದವರೆಗೂ ತಮ್ಮ ವಿಜಯಪತಾಕೆಯನ್ನು ಹಾರಿಸಿದರು.
ಮೂಲ: ಉಪೀಂದರ್ ಸಿಂಗ್
ಅಲ್ಪಾಯುವಾದ ಒಂದು ಆಂಧ್ರರಾಜಕುಲ ನಾಗಾರ್ಜುನಕೊಂಡದಿಂದ ಆಳುತ್ತಿತ್ತು. ಈ ಊರಿನ ಹೆಸರಿಗೆ ಕಾರಣನಾದ ನಾಗಾರ್ಜುನನೆಂಬ ವಿದ್ವಾಂಸನು ಯಾವ ದರ್ಶನಕ್ಕೆ ಸೇರಿದವನು?
ಸಾಮಾನ್ಯಶಕ ಮೂರನೆಯ ಶತಮಾನದೊಳಗೆ ಸಾತವಾಹನರ ಬಲ ಕುಗ್ಗಿ ಅವರ ಮಂಡಲದಲ್ಲಿ ಹೊಸ ರಾಜವಂಶಗಳ ಉದ್ಭವವಾಯಿತು. ಕೃಷ್ಣಾ-ಗೋದಾವರಿಗಳ ನಡುವಣ ಆಂಧ್ರದೇಶವನ್ನು ಈ ನಿಟ್ಟಿನಲ್ಲಿ ಆಳಿದವರು ಇಕ್ಷ್ವಾಕುಗಳು. ಆದರೆ ಒಂದೇ ಶತಮಾನದೊಳಗೆ ಇವರು ಕಾಂಚೀಪುರದ ಪಲ್ಲವರಿಗೆ ಸೋಲುವಂತಾಯಿತು. ಇವರ ವಂಶನಾಮ ಶ್ರೀರಾಮಚಂದ್ರನ ಇಕ್ಷ್ವಾಕುವಂಶಕ್ಕೆ ಸಂಬಂಧವಿತ್ತೇ ಇಲ್ಲವೇ ಎಂಬುದು ಪ್ರಶ್ನಾರ್ಥಕವೇ ಆಗಿದೆ. ದಕ್ಷಿಣಾಪಥದಲ್ಲಿ ಪುರಾತನವಾದ ಕೋಸಲ, ಇಕ್ಷ್ವಾಕು, ಮೊದಲಾದ ಹೆಸರುಗಳು ಮತ್ತೆ ತೋರಿಕೊಳ್ಳುವುದು ಉತ್ತರಾಪಥದಿಂದ ವಲಸೆ ಬಂದದ್ದರ ಕುರುಹಿರಬಹುದು. ಇದೇನೇ ಇದ್ದರೂ ಆಂಧ್ರದ ಈ ಇಕ್ಷ್ವಾಕು ಕುಲ, ನಾಗಾರ್ಜುನಕೊಂಡದ ಗಿರಿದುರ್ಗದಿಂದ ರಾಜ್ಯವನ್ನು ನಡೆಸುತ್ತಿತ್ತು. ಇವರ ಆಶ್ರಯದಲ್ಲಿ ಈ ನಗರವು ಮಹಾಯಾನದ ವಿದ್ಯಾನಿಲಯವಾಯಿತು. ಊರಿನ ನಾಮಧೇಯವೇ ಮಹಾಯಾನಪ್ರಸ್ಥಾನವನ್ನು ಹುಟ್ಟುಹಾಕಿದ ನಾಗಾರ್ಜುನನ ಮೇಲೆ ಇರಿಸಿದ್ದಾಗಿದೆ. ಆದರೆ ಇಕ್ಷ್ವಾಕುಗಳು ಬೌದ್ಧಪಕ್ಷಪಾತಿಗಳೆಂದು ಹೇಳುವುದು ತಪ್ಪಾದೀತು. ಈ ಅರಸರು ಸತ್ಯವಾಗಿಯೂ ಮತಸಮನ್ವಯವನ್ನು ಚೆನ್ನಾಗಿ ಕಂಡುಕೊಂಡವರು. ಇವರ ಮೂಲಪುರುಷನಾದ ವಾಸಿಷ್ಠೀಪುತ್ರ ಚಾಂತಮೂಲನು ಅಶ್ವಮೇಧವನ್ನೂ ಮಾಡಿದ್ದನೆಂದು ತಿಳಿಯುತ್ತದೆ. ಧನಕವಂಶದ ದಂಡನಾಯಕ ಮಹಾತಳವಾರ ಖಂಡವಿಶಾಖನಿಗೆ ಚಾಂತಮೂಲನ ಮಗಳಾದ ಚಾಂತಿಶ್ರೀಯೊಡನೆ ವಿವಾಹವಾಗಿತ್ತೆಂದು ತಿಳಿದುಬರುತ್ತದೆ.
ಮೂಲ: ಆರ್. ಸಿ. ಮಜುಮ್ದಾರ್ “Ancient India”.
ರಾಷ್ಟ್ರಕೂಟರ ಹಿರಿಮೆಯನ್ನು ಎಂದೆಂದಿಗೂ ಸಾರುವ ಏಕ್ಯ ಶಿಲಾ ನಿರ್ಮಿತಿಯಾದ ದೇವಾಲಯ ಯಾವುದು?
ಎಲ್ಲೋರಾ ಗುಹಾಂತರ ದೇವಾಲಯಗಳಲ್ಲಿ ಹದಿನಾರನೆಯದು ಕೈಲಾಸನಾಥನ ದೇವಸ್ಥಾನ. ಇದರ ಕಲ್ಪನೆಯೇ ಯಾರ ಊಹೆಗೂ ನಿಲುಕದ್ದು. ಇಡಿಯ ಕಟ್ಟಡವೇ ಒಂದು ಕಲ್ಲಿನಿಂದ ಕೊರೆದದ್ದು; ವಸ್ತುತಃ ಅದು ನಿಜವಾದ ಕಟ್ಟಡವೇ ಅಲ್ಲ. ಭಾರತದಲ್ಲಿರಲಿ, ಜಗತ್ತಿನಲ್ಲಿಯೇ ಈ ಬಗೆಯ ಸ್ಥಾಪತ್ಯವಿದ್ಯೆ ಕಾಣಸಿಗುವುದಿಲ್ಲ. ಈ ದೇವಾಲಯದ ನಿರ್ಮಾಣದ ಸಿಂಹಭಾಗ ‘ಅಕಾಲವರ್ಷ ಶುಭತುಂಗ’ ಎಂದು ಹೆಸರಾಗಿದ್ದ ರಾಷ್ಟ್ರಕೂಟರ ಮೊದಲನೆಯ ಕೃಷ್ಣನ ಕಾಲದಲ್ಲಿ ಸಾಗಿತು. ಪಟ್ಟದಕಲ್ಲಿನಲ್ಲಿ ಕಂಡುಬರುವ ವಿರೂಪಾಕ್ಷಸ್ವಾಮಿಯ ದೇವಾಲಯವು ಈ ಕೈಲಾಸನಾಥನ ದೇವಾಲಯದ ಕಲ್ಪನೆಗೆ ಸ್ಫೂರ್ತಿಯೆಂದು ಹೇಳಬಹುದು. ಪೃಥ್ವೀವಲ್ಲಭ ದಂತಿದುರ್ಗನ ಬಳಿಕ ಪಟ್ಟಕ್ಕೇರಿದ ಅಕಾಲವರ್ಷ ಮೊದಲನೆಯ ಕೃಷ್ಣನು ವಾತಾಪಿಯ ಚಾಲುಕ್ಯರ ಮೇಲೆ ದಂಡಯಾತ್ರೆಯನ್ನು ಸಾಗಿಸಿದ್ದನಾದುದರಿಂದ ಈ ಬಗೆಯ ಸ್ಫೂರ್ತಿಗೆ ಕಾರಣವೆನ್ನಬಹುದು. ಪಟ್ಟದಕಲ್ಲಿನ ವಿರೂಪಾಕ್ಷದೇವಾಲಯವೂ ಸಹ ಪಲ್ಲವರ ಕೈಲಾಸನಾಥ ಎಂದೇ ಹೆಸರಾದ ಮತ್ತೊಂದು ದೇವಾಲಯದ ಅನುರಚನೆಯಾಗಿದೆ. ಹೀಗೆ ಕಂಡರೆ ರಾಷ್ಟ್ರಕೂಟರ ಕೈಲಾಸನಾಥಮಂದಿರ ಮೂರು ರಾಜವಂಶಗಳ ಮೂಲಕ ಹಾಯ್ದು ಬಂದಿದೆ. ಒಂದು ಕಾಲದಲ್ಲಿ ಮಣಿಕೇಶ್ವರ, ಘೃಷ್ಣೇಶ್ವರ, ಎಂದೆಲ್ಲ ಹೆಸರಾಗಿದ್ದ ಈ ಮಂದಿರದಲ್ಲಿನ ಭಗವಂತನು ಜ್ಯೋತಿರ್ಲಿಂಗಸ್ವರೂಪಿಯೆಂದೂ ಖ್ಯಾತಿ ಪಡೆದಿದ್ದನು. ಆದರೆ, ಪ್ರಸ್ತುತ ಹೋಲ್ಕರ್ ವಂಶದವರು ನಿರ್ಮಿಸಿರುವ ಘೃಷ್ಣೇಶ್ವರ ದೇವಾಲಯವು ಜ್ಯೋತಿರ್ಲಿಂಗಪದವಿಯನ್ನು ಹೊಂದಿದೆ. ರಾಷ್ಟ್ರಕೂಟರ ವಿಕ್ರಮವಿಶೇಷಗಳನ್ನೇ ಕಾಣುವುದಾದರೆ ಅವರ ಉಚ್ಛ್ರಾಯಕಾಲ ಎಂಟರಿಂದ ಹತ್ತನೆಯ ಶತಮಾನಗಳ ನಡುವು. ಪಸ್ಚಿಮದ ಪ್ರತೀಹಾರರು, ಗೌಡದೇಶದ ಪಾಲರು, ವೆಂಗಿಯ ಚಾಲುಕ್ಯರು, ಮತ್ತು ತಂಜಾವೂರಿನ ಚೋಳರು ರಾಷ್ಟ್ರಕೂಟರ ಪರಾಕ್ರಮವನ್ನು ತಾಳಲಾರದೆ ಹಿಮ್ಮೆಟ್ಟಿದ್ದರು. ‘ಪ್ರಭೂತವರ್ಷ ಜಗತ್ತುಂಗ’ ಎಂದು ಹೆಸರು ಪಡೆದ ಮುಮ್ಮಡಿ ಗೋವಿಂದನ ಕಾಲದಲ್ಲಿ ರಾಷ್ಟ್ರಕೂಟರು ಧನುಷ್ಕೋಟಿಯಿಂದ ಕಾನ್ಯಕುಬ್ಜದ ವರೆಗೂ ತಮ್ಮ ವಿಜಯವಿಹಾರವನ್ನು ಮೆರೆದಿದ್ದರು. ಪ್ರಭೂತವರ್ಷನ ಮಗನಾದ ಮೊದಲನೆಯ ಅಮೋಘವರ್ಷನು ರಾಷ್ಟ್ರಕೂಟವಂಶದ ಮುಕುಟಮಣಿಯಾಗಿದ್ದನೆನ್ನುವುದು ಜಗದ್ವಿಖ್ಯಾತವೇ ಹೌದು.
ಮೂಲ: ಎಮ್. ಕೆ. ಧವಿಲ್ಕರ್; “Kailasa- Stylistic Development and Chronology”.
ಹೊಯ್ಸಳರು ಕಟ್ಟಿರುವ ದೇವಾಲಯಗಳಲ್ಲಿನ ವಿಸ್ಮಯಕರವಾದ ಶಿಲ್ಪಗಳು ನುಣುಪಾದ ಒಂದು ಬಗೆಯ ಕಲ್ಲಿನಿಂದ ಕೆತ್ತಲ್ಪಟ್ಟಿವೆ. ಈ ಕಲ್ಲಿನ ಹೆಸರೇನು?
ಬಳಪದ ಕಲ್ಲು ಗಡುಸಲ್ಲದ ನವುರಾದ ಕಲ್ಲು. ಟ್ಯಾಲ್ಕ್ ಎನ್ನುವ ಒಂದು ದ್ರವ್ಯವಿಶೇಷದ ಪದರಗಳಿಂದಲೇ ಬಳಪದ ಕಲ್ಲು ಉತ್ಪನ್ನವಾಗುವುದರಿಂದ ಅದನ್ನು ಕೆತ್ತನೆಗೆ ಬಳಸುವುದು ಅನುಕೂಲ. ಇದೇ ಕಾರಣಕ್ಕೆ ಹೊಯ್ಸಳರು ಬೇಲೂರು, ಹಳೆಬೀಡು, ಮತ್ತು ಸೋಮನಾಥಪುರಗಳಲ್ಲದೆ ನೂರಾರು ಸ್ಥಾನಗಳಲ್ಲಿ ನಿರ್ಮಿಸಿರುವ ಮನೋಹರವಾದ ದೇವಾಲಯಗಳಲ್ಲಿ ಇದೇ ಕಲ್ಲನ್ನು ಬಳಸಲಾಗಿದೆ. ಇಸ್ಲಾಮಿನ ದೌರ್ಜನ್ಯದಿಂದಾಗಿ ಹಲವೆಡೆ ಹೊಯ್ಸಳರ ಕಾಲದ ಶಿಲ್ಪಗಳು ಭಗ್ನವಾಗಿದ್ದರೂ ಅವುಗಳ ಅತಿಶಯವಾದ ರಾಮಣೀಯಕತೆ ಕುಂದಿಲ್ಲ. ಹೊಯ್ಸಳರು ಕರ್ಣಾಟಮಂಡಲದ ದಕ್ಷಿಣ ದೆಸೆಯಲ್ಲಿನ ಹಾಸನ, ಮೈಸೂರು, ಶಿವಮೊಗ್ಗ, ಮತ್ತು ಚಿತ್ರದುರ್ಗ ಪ್ರಾಂತಗಳನ್ನು ಆಳುತ್ತಿದ್ದರು. ಹತ್ತನೆಯ ಶತಮಾನದಿಂದ ಹದಿನಾಲ್ಕನೆಯ ಶತಮಾನದ ವರೆಗೆ ಈ ದ್ವಾರಸಮುದ್ರದ ಅರಸರು ಪ್ರಭಾವಶಾಲಿಗಳಾಗಿದ್ದು ಚೋಳರ ಹಾಗೂ ಪಾಂಡ್ಯರ ಭೂ ಭಾಗಗಳನ್ನೂ ವಶಪಡಿಸಿಕೊಂಡಿದ್ದರು. ಹೊಯ್ಸಳರ ದೇವಾಲಯಗಳದ್ದು ಅತು ವಿಶಿಷ್ಟವಾದ ರಮಣೀಯವಾದ ಶೈಲಿ. ಬೇಲೂರು, ಹಳೆಬೀಡು, ಮತ್ತು ಸೋಮನಾಥಪುರಗಳು ಯುನೆಸ್ಕೂUNESCO ವಿಶ್ವ ಪಾರಂಪರಿಕ ತಾಣಗಳೆಂದು ಗುರುತಿಸಲ್ಪಟ್ಟಿವೆ.
ಕದಂಬವು ಭಾರತೀಯ ನೌಕಾಪಡೆಯ ಪ್ರಮುಖ ನೌಕಾ ನೆಲೆಯಾಗಿದ್ದು, ಪ್ರಸಿದ್ಧ ರಾಜವಂಶವನ್ನು ಆಚರಿಸುತ್ತಿದೆ. ಐಎನ್ಎಸ್ ಕದಂಬ ಎಲ್ಲಿದೆ?
ಕದಂಬರು ಹೆಚ್ಚಿನ ಅತಿಶಯವನ್ನೆಂದೂ ಹೊಂದದ ಪಶ್ಚಿಮದ ಕರಾವಳಿಯಲ್ಲಿ ೪ರಿಂದ-೬ ನೆಯ ಶತಮಾನದವರೆಗೆ ತಮ್ಮ ಶಾಸನವನ್ನು ನಡೆಸಿಕೊಂಡು ಬಂದ ಅರಸರು. ಕೆಲವು ಮೂಲಗಳು ಕದಂಬರು ಉತ್ತರ ಭಾರತದಿಂದ ಬಂದವರೆಂದು ತಿಳಿಸುತ್ತವೆಯಾದರೂ, ಹಲವು ಇವರು ಕುಂತಳ( ಉತ್ತರ ಕರ್ನಾಟಕ) ಪ್ರದೇಶದಕ್ಕೆ ಸೇರಿದವರೆಂದು ಹೇಳುತ್ತವೆ. ನಾಲ್ಕನೆಯ ಶತಮಾನದಲ್ಲಿ ಕುಂತಲಪ್ರದೇಶದ ಶ್ರೋತ್ರಿಯ ಬ್ರಾಹ್ಮಣನಾದ ಮಯೂರಶರ್ಮನು ಪಲ್ಲವರ ಅಧಿಕಾರಿಯೊಬ್ಬನಿಂದ ಅವಮಾನಿತನಾದಾಗ, ಕ್ರುದ್ಧನಾಗಿ ಪಲ್ಲವರನ್ನು ಧಿಕ್ಕರಿಸಬಲ್ಲ ಸೇನೆಯನ್ನು ಕೂಡಿಸಿ ಭೂಮಿಯನ್ನು ವಶಪಡಿಸಿಕೊಂಡನು. ಪಶ್ಚಿಮ ಕರಾವಳಿಯಲ್ಲಿ ತನ್ನದೇ ಕ್ಷೇತ್ರವನ್ನು ಸ್ಥಾಪಿಸಿ ಆಳತೊಡಗಿದನು. ಮೊದಲ ಪೊಲೆಕೇಶಿಯ ಮಗನಾದ ಚಾಲುಕ್ಯರ ಕೀರ್ತಿವರ್ಮನು ಏಳನೆಯ ಶತಮಾನದ ಆದಿಯಲ್ಲಿ ಕದಂಬರನ್ನು ಬಗ್ಗುಬಡಿದಿದ್ದನೆಂದು ರವಿಕೀರ್ತಿಯ ಶಾಸನ ದಾಖಲಿಸುತ್ತದೆ: ‘ನೃಪತಿಗಂಧಗಜೇನ ಮಹೌಜಸಾ ಪೃಥುಕದಂಬಕದಂಬಕದಂಬಕಮ್’. ಆದರೆ ಹೀಗೆ ಕರ್ಣಾಟಮಂಡಲದಲ್ಲಿ ಅವಸಾನ ಹೊಂದಿದ ಕದಂಬವಂಶ ಗೋವಾ ಪ್ರದೇಶದಲ್ಲಿ ೧೦ ನೆಯ ಶತಮಾನದಲ್ಲಿ ಮತ್ತೊಮ್ಮೆ ತಲೆಯೆತ್ತಿತು. ಹದಿನಾಲ್ಕನೆಯ ಶತಮಾನದವರೆಗೂ ಆಳ್ವಿಕೆ ನಡೆಸಿತು. ಶಿಲಾಹಾರರನ್ನು ಗೆದ್ದು ಕೊಂಕಣವನ್ನು ಜಯಿಸಿದ ಇವರ ಛಾಪು ಇಂದಿಗೂ ಆ ಪ್ರದೇಶದಲ್ಲಿ ಗಟ್ಟಿಯಾಗಿದೆ. ಇಂದಿಗೂ ಗೋವಾದ ಎಷ್ಟೋ ಹಳೆಯ ಮನೆಗಳಲ್ಲಿ ಕದಂಬರ ಸಿಂಹಲಾಂಛನ ಕಂಡುಬರುತ್ತದೆ. ಗೋವಾದ ರಾಜ್ಯಸಾರಿಗೆ ವ್ಯವಸ್ಥೆಗೆ ಕದಂಬರ ಹೆಸರಿಡಲಾಗಿದೆ. ಭಾರತೀಯ ನೌಕಾಪಡೆಯ ಬೃಹತ್ ನೌಕೆಯೊಂದರ ಹೆಸರು ಐಎನ್ ಎಸ್ ಕದಂಬ ಎಂದು.
ಈ ಚಿತ್ರ ಕಾರವಾರದಲ್ಲಿರುವ ಐಎನ್ಎಸ್ ಕದಂಬದದ್ದು * ಬ್ರಿಟಾನಿಕಾ
ಹಸನ್ ಗಂಗು ದಕ್ಷಿಣದಲ್ಲಿ ಯಾವ ಸುಲ್ತಾನ ಶಾಹಿಯನ್ನು ಸ್ಥಾಪಿಸಿದನು?
ಬೆಂಗಳೂರಿನ ಉಪನಗರವಾಗಿರುವ ಯಲಹಂಕದಲ್ಲಿ ಜನಿಸಿದರು. ಅವನ ಕುಟುಂಬವು ವಿಜಯನಗರ ಸಾಮ್ರಾಜ್ಯಕ್ಕೆ ಯೆಲೆಹಂಕದ ಸಾಮಂತರಾಗಿದ್ದರು. ೧೫೩೭ ರಲ್ಲಿ, ಅವರು ವಿಜಯನಗರ ಚಕ್ರವರ್ತಿಯ ಅನುಮತಿಯೊಂದಿಗೆ ಒಂದು ಮಣ್ಣಿನ ಕೋಟೆಯನ್ನು ನಿರ್ಮಿಸಿ ಅದರೊಳಗೆ ಒಂದು ಪಟ್ಟಣವನ್ನು ಪ್ರಾರಂಭಿಸಿದರು. ಅವರು ಅದನ್ನು ಬೆಂಗಳೂರು ಕೋಟೆ ಎಂದು ಕರೆದರು. ಬೆಂಗಳೂರು ಎಂಬ ಹೆಸರು ಬದನೆಕಾಯಿ ಅಥವಾ ಕಡಲೆ ಕಾಳು ಧಾನ್ಯಕ್ಕೆ ಸಂಬಂಧಿಸಿದೆ ಎಂಬ ಜನಪ್ರಿಯ ಕಥೆಗಳಿಗೆ ವಿರುದ್ಧವಾಗಿ, ಐತಿಹಾಸಿಕ ಶಾಸನಗಳು 1200 ವರ್ಷಗಳ ಹಿಂದಿನ ಬೆಂಗಳೂರನ್ನು ಉಲ್ಲೇಖಿಸುತ್ತವೆ. ಈ ಕೋಟೆಯು ಎಂಟು ದ್ವಾರಗಳನ್ನು ಒಳಗೊಂಡಿದ್ದು, ಇದು ಈಗ ಜನಪ್ರಿಯವಾಗಿರುವ ಹಲ್ಸೂರು, ಆನೇಕಲ್, ಕೆಂಗೇರಿ ಮತ್ತು ಯೆಲೆಹಂಕ ಪ್ರದೇಶಗಳನ್ನು ಉಲ್ಲೇಖಿಸುತ್ತದೆ. ಅವನು ತನ್ನ ರಾಜಧಾನಿಯನ್ನು ಯೆಲೆಹಂಕದಿಂದ ಬೆಂಗಳೂರಿಗೆ ಬದಲಾಯಿಸಿದನು. ನಿರ್ದಿಷ್ಟ ವೃತ್ತಿಗಳು ಮತ್ತು ಸರಕುಗಳಿಗೆ ಮೀಸಲಾಗಿರುವ ಹಲವಾರು “ಪೇಟೆ” ಪ್ರದೇಶಗಳು ಕೋಟೆಯೊಳಗೆ ಬಂದವು. ಈ ಕೋಟೆಯು ನಾಗರತ್ಪೇಟೆ ಮತ್ತು ಚಿಕ್ಕಪೇಟೆ ಪ್ರದೇಶಗಳ ಬಳಿ ಇದೆ. ಕೆಂಪ ಗೌಡ ತನ್ನದೇ ಆದ ನಾಣ್ಯವನ್ನು ಟಂಕಿಸುವ ತಪ್ಪನ್ನು ಮಾಡಿದನು, ಅದು ವಿಜಯನಗರ ಚಕ್ರವರ್ತಿಯನ್ನು ಕೆರಳಿಸಿತು. ಪರಿಣಾಮವಾಗಿ ಕೆಂಪಗೌಡ ಐದು ವರ್ಷಗಳ ಕಾಲ ಜೈಲಿನಲ್ಲಿದ್ದರು. ಈ ಕೋಟೆಯನ್ನು ಟಿಪ್ಪು ಸುಲ್ತಾನನು ಸುಧಾರಿಸಿದನು ಮತ್ತು ಅಂತಿಮವಾಗಿ ಬ್ರಿಟಿಷರ ವಶಕ್ಕೆ ತರಲಾಯಿತು. ಶಿವಾಜಿಯ ತಂದೆ ಬಿಜಾಪುರ ಸುಲ್ತಾನರಿಂದ ಕೋಟೆ ಮತ್ತು ಸುತ್ತಮುತ್ತಲಿನ ಭೂಮಿಗೆ ಜಾಗೀರ್ ಪಡೆದರು. ಶಿವಾಜಿಯ ಮಲಸಹೋದರನು ಕೋಟೆಯನ್ನು ಔರಂಗಜೇಬನ ಸೈನ್ಯಕ್ಕೆ ಕಳೆದುಕೊಂಡನು, ನಂತರ ಔರಂಗಜೇಬನು ನಗರವನ್ನು ಮೈಸೂರಿನ ಒಡೆಯರ್ಗೆ ಮಾರಿದನು.
ಿತ್ರ, ಬೆಂಗಳೂರು ಕೋಟೆಯ ಅವಶೇಷಗಳು ಫಜ್ಲುಲ್ ಹಸನ್,
“ಶತಮಾನಗಳ ಮೂಲಕ ಬೆಂಗಳೂರು.”
ದೇವಗಿರಿಯ ಯಾದವರು ಮೂರು ತಲೆಮಾರುಗಳುದ್ದಕ್ಕೂ ದೆಹಲಿಯ ಸುಲ್ತಾನರೆದುರು ಹೋರಾಡಿದರು. ಯಾದವರ ಸೋಲಿನನಂತರ ಇಡಿಯ ದಕ್ಷಿಣಾಪಥವೇ ಮುಸಲ್ಮಾನರ ದಾಳಿಗೆ ತುತ್ತಾಯಿತು. ದೇವಗಿರಿಯ ಇಂದಿನ ಹೆಸರೇನು?
ದ್ವಾರಸಮುದ್ರದ ಹೊಯ್ಸಳರಂತೆಯೇ ದೇವಗಿರಿಯ ಯಾದವರು ಭಗವಾನ್ ಶ್ರೀಕೃಷ್ಣನ ವೃಷ್ಣಿವಂಶವನ್ನು ತಮ್ಮದೆಂದು ಹೆಸರಿಸಿಕೊಂಡವರು. ಇಬ್ಬರೂ ಹತ್ತನೆಯ ಶತಮಾನದಲ್ಲಿ ರಾಷ್ಟ್ರಕೂಟರ ಪತನದ ಬಳಿಕ ರಾಜ್ಯಸ್ಥಾಪನೆ ಮಾಡಿಕೊಂಡರು. ಮಹಾರಾಷ್ಟ್ರದಲ್ಲಿರುವ ವಿದರ್ಭಪ್ರಾಂತವನ್ನು ಯಾದವರು ವಶಪಡಿಸಿಕೊಂಡರು. ಒಂದೇ ವಂಶಕ್ಕೆ ಸೇರಿದವರೆನಿಸಿದರೂ ದುರ್ದೈವದಿಂದ ಯಾದವ-ಹೊಯ್ಸಳರಿಗೆ ಕದನ ತಪ್ಪಲಿಲ್ಲ. ಕಾಕತೀಯರೊಂದಿಗೂ ದೇವಗಿರಿಯ ದೊರೆಗಳು ಯುದ್ಧಗಳನ್ನು ನಡೆಸಿದ್ದರು. ದೆಹಲಿಯ ಸುಲ್ತಾನರು ದಕ್ಷಿಣದತ್ತ ಕಣ್ಣು ಹಾಯಿಸಿದಾಗ ಒಟ್ಟಾಗಬೇಕಾಗಿದ್ದ ಈ ಮೂರು ರಾಜವಂಶಗಳು ಸಂಕುಚಿತವಾದ ಬುದ್ಧಿಯಿಂದಾಗಿ ಪ್ರತ್ಯೇಕವಾಗಿಯೇ ಉಳಿದು ಒಂದೊಂದಾಗಿ ಪತನವಾದವು. ೧೨೯೬ರಲ್ಲಿ ಅಲ್ಲಾವುದ್ದೀನ್ ಖಲ್ಜಿಯು ರಾಮಚಂದ್ರ ಯಾದವನನ್ನು ಸೋಲಿಸಿದಾಗ ಆತ ದುರ್ಭೇದ್ಯವಾದ ದೇವಗಿರಿಯ ದುರ್ಗವನ್ನು ಸೇರಿಕೊಂಡನು. ಆದರೆ ಆಹಾರ-ನೀರುಗಳ ಪೂರೈಕೆಯ ಅವ್ಯವಸ್ಥೆಯಿಂದಾಗಿ ಆ ಮಹಾದುರ್ಗವೂ ಮಣಿಯುವಂತಾಯಿತು. ಆದರೆ ಕೆಲವೇ ವರ್ಷಗಳಲ್ಲಿ ಖಲ್ಜಿ ಸುಲ್ತಾನನಿಗೆ ಕೊಡುವೆನೆಂದು ಒಪ್ಪಿಕೊಂಡಿದ್ದ ಕಪ್ಪವನ್ನು ನಿಲ್ಲಿಸಿದಾಗ ಭೀಕರನಾದ ಮಲಿಕ್ ಕಾಫುರನು ೧೩೦೭ರಲ್ಲಿ ಘೋರವಾದ ಯುದ್ಧದಲ್ಲಿ ರಾಮಚಂದ್ರ ಯಾದವನನ್ನು ಮತ್ತೆ ಸೋಲಿಸಿದನು. ಇದಾದಮೇಲೆ ರಾಮಚಂದ್ರ ಯಾದವನು ದೆಹಲಿಯ ಸಿಂಹಾಸನಕ್ಕೆ ಮಣಿದನು. ಆದರೆ ಅವನ ಮಗನಾದ ಶಂಕರ ಯಾದವನು ಅದಕ್ಕೊಪ್ಪದೆ ಸೆಡ್ಡುಹೊಡೆದಾಗ, ಕಾಫುರನು ಮತ್ತೆ ದಂಡಯಾತ್ರೆ ಮಾಡಿ ಶಂಕರ ಯಾದವನನ್ನು ಕೊಂದನು. ರಾಮಚಂದ್ರ ಯಾದವನ ಅಳಿಯ ಹರಪಾಲನು ಯುದ್ಧಕ್ಕೆ ಕೈ ಹಾಕಿದಾಗ ಅವನನ್ನೂ ಸೋಲಿಸಿ ಜೀವಸಹಿತ ಹಿಡಿದು ಅವನ ಚರ್ಮ ಸುಲಿದು ದಾರುಣವಾಗಿ ಕೊಂದರು. ಯಾದವರ ಸಾಮ್ರಾಜ್ಯ ಹೀಗೆ ಅಂತ್ಯಕಂಡಿತು. ಚಿತ್ರದಲ್ಲಿ ಕಾಣಿಸಿರುವುದು ದೇವಗಿರಿಯ ದುರ್ಗ. ಅದಕ್ಕಿಂದು ದೌಲತಾಬಾದ್ ಎಂದು ಹೆಸರುಂಟು; ಛತ್ತ್ರಪತಿಸಂಭಾಜಿನಗರದ ಬಳಿಯೇ ಇದನ್ನು ಕಾಣಬಹುದು.
ತೆನಾಲಿ ರಾಮಕೃಷ್ಣನು ಯಾವ ಮಹಾಚಕ್ರವರ್ತಿಯ ಸಹಚರನಾಗಿದ್ದನು?
ತೆನಾಲಿಯ ರಾಮಕೃಷ್ಣ ಅಥವಾ ರಾಮಲಿಂಗನು ಹದಿನಾರನೆಯ ಶತಮಾನದ ಒಳ್ಳೆಯ ತೆಲುಗು ಕವಿ. ವಿಜಯನಗರದ ಸಾರ್ವಭೌಮ, ಚಕ್ರೇಶ್ವರ ಶ್ರೀ ಕೃಷ್ಣದೇವರಾಯನ ಭುವನವಿಜಯವೆಂದು ಹೆಸರಾದ ಸಭೆಯಲ್ಲಿ ಅಷ್ಟದಿಗ್ಗಜಕವಿಗಳಲ್ಲಿ ಒಬ್ಬನಾಗಿದ್ದನು. ಇವನ ಪಾಂಡುರಂಗಮಾಹಾತ್ಮ್ಯಮು ಎನ್ನುವ ಪ್ರಬಂಧಕಾವ್ಯವಲ್ಲದೆ ಹಲವಾರು ಚಾಟುಪದ್ಯಗಳೂ ತೆಲುಗಿನಲ್ಲಿ ಪ್ರಸಿದ್ಧವಾಗಿವೆ. ಇವನು, ವಿಲಕ್ಷಣವಾದ ಹಾಸ್ಯಪ್ರವೃತ್ತಿಯಿಂದಾಗಿ ವಿಕಟಕವಿಯೆನಿಸಿದನು. ಈ ಕಾರಣದಿಂದಲೇ ಜನರು ಇವನ ಚಾತುರ್ಯದ ಬಗ್ಗೆ ಕಟ್ಟಿರುವ ಕಥೆಗಳು ನೂರಾರು. ಆದರೆ ಇವಕ್ಕೆ ಗಟ್ಟಿಯಾದ ಆಧಾರವನ್ನು ಕೊಡಲಾಗದು. ವಿಜಯನಗರದ ಮಹಾರಾಜರ ಕೀರ್ತಿರಾಶಿಯಲ್ಲಿ ತೆನಾಲಿ ರಾಮಕೃಷ್ಣನದೂ ಒಂದು ಗಣ್ಯವಾದ ಪಾಲು. ಹದಿನಾಲ್ಕನೆಯ ಶತಮಾನದಿಂದ ಹದಿನಾರನೆಯ ಶತಮಾನದ ವರೆಗೆ ವಿದ್ಯಾನಗರವೆಂದೂ ಹೆಸರಾದ ಈ ಪಂಪಾಕ್ಷೇತ್ರವನ್ನು ಇಸ್ಲಾಮಿನ ವಿರುದ್ಧ ಸೆಣೆಸಲೆಂದೇ ವಿದ್ಯಾರಣ್ಯಸ್ವಾಮಿಗಳು ಸ್ಥಾಪಿಸಿದರು . ವಿಜಯನಗರಸಾಮ್ರಾಜ್ಯವು ಇಡಿಯ ದಕ್ಷಿಣಾಪಥದ ಸಾಂಸ್ಕೃತಿಕಜಗತ್ತನ್ನು ಪೋಷಿಸಿ ವೃದ್ಧಿಗಾಣಿಸಿತು. ತಿರುಪತಿಯ ಸನ್ನಿಧಿಯಲ್ಲಿ ಕನ್ನಡರಮಾರಮಣ ಶ್ರೀಕೃಷ್ಣದೇವರಾಯರು ತಮ್ಮ ಪತ್ನಿಯರೊಂದಿಗಿರುವ ಲೋಹಶಿಲ್ಪವನ್ನು ಕಾಣಬಹುದು. ವಿಜಯನಗರದ ಸ್ಥಾಪನದಿಂದಾಗಿ ಮಧುರೆಯ ಸುಲ್ತಾನರು ಅಳಿದು, ಬಿಜಾಪುರ ಮೊದಲಾದ ಮುಸ್ಲಿಮ್ ಸಂಸ್ಥಾನಗಳು ಹದ್ದುಬಸ್ತಿನಲ್ಲಿದ್ದವು. ವಿಜಯನಗರ ಸಂಸ್ಥಾನವು ಸನಾತನಧರ್ಮಕ್ಕೆ ಕವಚಪ್ರಾಯವಾಗಿದ್ದಿತು. ಆ ದೊರೆಗಳು ಹುಟ್ಟುಹಾಕಿದ ನವರಾತ್ರಮಹೋತ್ಸವದ ವಿಶೇಷಗಳು ಇಂದಿಗೂ ಮೈಸೂರಿನ ಒಡೆಯರ ಮೂಲಕ ಮುಂದುವರೆಯುತ್ತಿವೆ. ಅಳಿಯ ರಾಮರಾಯನ ಕಾಲದಲ್ಲಿ ಆಂತರಿಕ ದ್ರೋಹದಿಂದಲೂ, ಶತ್ರುಗಳ ಒಗ್ಗಟ್ಟಿನ ದಾಳಿಯಿಂದಲೂ ವಿಜಯನಗರವು ರಕ್ಕಸತಂಗಡಿಯ ಯುದ್ಧದಲ್ಲಿ ಪತನಕ್ಕೀಡಾಯಿತು. ಹೃದಯವಿದ್ರಾವಕವಾಗಿ ಛಿದ್ರವಾಗಿರುವ ಹಾಳು ಹಂಪೆಯ ರಾಜಧಾನಿಯು ನಮಗಿಂದೂ ಸ್ಫೂರ್ತಿಯನ್ನೂಆರಾಧನಾಭಾವವನ್ನೂ ಉಕ್ಕಿಸುತ್ತವೆ. ಚಿತ್ರದಲ್ಲಿ ಕಾಣಿಸುತ್ತಿರುವುದು ತೆನಾಲಿಯಲ್ಲಿ ಇರಿಸಿರುವ ರಾಮಕೃಷ್ಣನ ಮೂರ್ತಿಶಿಲ್ಪ.
ಮೂಲ: MAP ಅಕ್ಯಾಡೆಮಿ
ಗಂಗರು, ಶ್ರವಣಬೆಳಗೊಳದಲ್ಲಿ ಜೈನಸಂಪ್ರದಾಯದ ಮುಖ್ಯತಮವಾದ ಒಂದು ಶ್ರದ್ಧಾಕೇಂದ್ರಕ್ಕೆ ಕಾರಣೀಭೂತರಾದರು. ಈ ಜಗದ್ವಿಖ್ಯಾತ ಶಿಲ್ಪದ ಹೆಸರೇನು?
ಹದಿನೆಂಟು ಮೀಟರ್ ಎತ್ತರವಿರುವ ಗೊಮ್ಮಟೇಶ್ವರಸ್ವಾಮಿಯ ಶಿಲ್ಪವು ಜಗತ್ತಿನಲ್ಲಿಯೇ ಏಕಶಿಲಾನಿರ್ಮಿತಿಗಳ ಸಾಲಿನಲ್ಲಿ ಕೀರ್ತನೀಯವಾಗಿದೆ. ಇದು ಋಷಭದೇವ ತೀರ್ಥಂಕರನ ಕಿರಿಯ ಮಗನಾದ ಬಾಹುಬಲಿಯು ಜಿನಾವಸ್ಥೆಯನ್ನು ಹೊಂದುತ್ತಿರುವ ಸ್ಥಿತಿಯ ಶಿಲ್ಪ. ಗಂಗರ ನಾಲ್ವಡಿ ರಾಚಮಲ್ಲನ ಅಮಾತ್ಯನಾಗಿದ್ದ ಚಾವುಂಡರಾಯನು ಈ ಕಾರ್ಯವನ್ನು ಕೈಗೊಂಡು ಪೂರ್ಣಗೊಳಿಸಿದನು. ಮೌರ್ಯ ವಂಶದ ಐದನೆಯ ಅರಸನಾದ ಸಂಪ್ರತಿಚಂದ್ರಗುಪ್ತನು ಭದ್ರಬಾಹು ಎನ್ನುವ ಜೈನಮುನಿಯನ್ನು ಗುರುವಾಗಿಸಿಕೊಂಡನು. ವಿರಕ್ತಿಭಾವದಿಂದ ಶ್ರವಣಬೆಳಗೊಳದಲ್ಲಿ ಪ್ರಾಯೋಪವೇಶ ವ್ರತವನ್ನು ಕೈಗೊಂಡು ದೇಹತ್ಯಾಗ ಮಾಡಿದನು. ಅಂದಿನಿಂದ ಈ ಕ್ಷೇತ್ರವು ಜೈನಸಂಪ್ರದಾಯದಲ್ಲಿ ಶ್ರೇಷ್ಠವೆನಿಸಿದೆ. ಗಂಗವಂಶವು ಸಾಮಾನ್ಯಶಕ ೨೫೦ರಿಂದ ಸುಮಾರು ಏಳುನೂರು ವರ್ಷಗಳ ಕಾಲ ಆಳ್ವಿಕೆ ನಡೆಸಿತು . ಈ ಸಂಸ್ಥಾನವು ಸುಭದ್ರವಾಗಿ, ಸುದೀರ್ಘವಾಗಿ ನೆಲೆನಿಲ್ಲಲು ಗಂಗರು ಮಾಡಿಕೊಂಡಿದ್ದ ಪಲ್ಲವ-ಚಾಲುಕ್ಯ-ಕದಂಬಾದಿಗಳೊಂದಿಗಿನ ವೈವಾಹಿಕಸಂಧಾನಗಳೇ ಮುಖ್ಯಕಾರಣ. ಕೃಷ್ಣಾ-ತುಂಗಭದ್ರೆಯರ ನಡುವಣ ಭೂಮಿಯು ಈ ಅರಸರಿಂದಲೇ ಗಂಗವಾಡಿಯೆಂದು ಹೆಸರು ಪಡೆಯಿತು. ಗಂಗರು ಪ್ರಧಾನವಾಗಿ ಜೈನರಾಗಿದ್ದರೂ ಕೆಲವರು ವೈದಿಕಸಂಪ್ರದಾಯವನ್ನು ನಚ್ಚಿದ್ದರು. ಕನ್ನಡದಲ್ಲಿ ಶಾಸ್ತ್ರಕಾವ್ಯಾದಿಸಾಹಿತ್ಯವನ್ನು ಸಾಕಷ್ಟು ಬೆಂಬಲಿಸಿದ ಗಂಗರು ದೇವಾಲಯನಿರ್ಮಾಣ, ಅರಣ್ಯಗಳ ತೆರವು, ಕೃಷಿ, ಗೋರಕ್ಷೆ, ಮತ್ತು ವಾಣಿಜ್ಯಗಳನ್ನು ಪ್ರೋತ್ಸಾಹಿಸಿದರು ಎಂದು ತಿಳಿದುಬರುತ್ತದೆ.
ಮೂಲ: https://karnatakatourism.org/tour-item/shravanabelagola/; https://www.britannica.com/topic/Ganga-dynasty
ಪ್ರಭಾವತಿಯು ದಕ್ಷಿಣದ ಪ್ರಭಾವಶಾಲಿನಿಯಾದ ಸಮ್ರಾಜ್ಞಿಯಾಗಿದ್ದಳು. ವಾಕಾಟಕವಂಶವನ್ನು ವಿವಾಹದಿಂದಾಗಿ ಸೇರಿದ ಈಕೆಯ ಮಹತ್ತಾದ ತವರಿನ ವಂಶ ಯಾವುದು?
ಸಾತವಾಹನರ ಬಳಿಕ ನೆಲೆಗೊಂಡ ಪ್ರಬಲರಾದ ಅರಸರು ವಾಕಾಟಕವಂಶದವರು. ಅವರು ಸಾಮಾನ್ಯಶಕ ಮೂರನೆಯ ಶತಮಾನದ ಮಧ್ಯದಿಂದ ಐದನೆಯ ಮತ್ತು ಆರನೆಯ ಶತಮಾನಗಳ ಸಂಧಿಕಾಲದವರೆಗೆ ಶಾಸನವನ್ನು ನಡೆಸಿದರು. ವಿಂಧ್ಯಾರಣ್ಯದ ಸೀಮೆಯಲ್ಲಿ ಮೊದಲಿಗೆ ಪ್ರತಿಷ್ಠಿತರಾದ ವಾಕಾಟಕರು ದಕ್ಷಿಣಕ್ಕೆ ತಮ್ಮ ವಲಯವನ್ನು ವಿಸ್ತರಿಸಿಕೊಂಡು ರಾಜಾಧಿರಾಜಪದವಿಯನ್ನು ಹೊಂದಿದರು. ಉತ್ತರದ ಗುಪ್ತವಂಶದ ಚಕ್ರೇಶ್ವರರ ಗಡಿನಾಡಿಗೆ ವಾಕಾಟಕರ ಸೀಮೆ ಅಂಟಿಕೊಂಡಿತ್ತು. ಮಹಾರಾಜಾಧಿರಾಜ ಸಮುದ್ರಗುಪ್ತನ ಮಗನಾದ ಚಂದ್ರಗುಪ್ತ-ವಿಕ್ರಮಾದಿತ್ಯನು ತನ್ನ ಪುತ್ರಿಯಾದ ಪ್ರಭಾವತೀಗುಪ್ತೆಯನ್ನು ವಾಕಾಟಕರ ಇಮ್ಮಡಿ ರುದ್ರಸೇನನಿಗೆ ಧಾರೆಯೆರೆದನು . ರುದ್ರಸೇನನು ಬೇಗದಲ್ಲಿ ಕಾಲವಾದುದರಿಂದ ಪ್ರಭಾವತೀಗುಪ್ತೆಯು ತನ್ನ ಮೊದಲ ಮಗನಾದ ದಿವಾಕರಸೇನನ ಪರವಾಗಿ ಆತ ಪ್ರೌಢತ್ವಕ್ಕೆ ಬರುವವರೆಗೂ ರಾಜ್ಯಭಾರವನ್ನು ತಾನೇ ವಹಿಸಿದಳು. ಈಕೆ ವಾಕಾಟಕರ ಮನೆಯನ್ನು ಸೇರಿಯಾದಮೇಲೆಯೂ ತನ್ನ ತವರ ಹೆಸರನ್ನು ಬಿಟ್ಟಿರಲಿಲ್ಲ. ಶಾಸನಗಳನ್ನೂ ನಾಣ್ಯಗಳನ್ನೂ ತನ್ನ ಹೆಸರಿನಲ್ಲಿಯೇ ಟಂಕಿಸಿದಳು. ವಾಕಾಟಾಕರೊಂದಿಗೆ ಪ್ರಭಾವತೀಗುಪ್ತೆಯ ಮೂಲಕ ಸಾಧಿಸಿದ ಸಂಧಾನವು ಗುಪ್ತಚಕ್ರೇಶ್ವರರಿಗೆ ಶಕರೊಡನೆಯ ಸೆಣಸಿನಲ್ಲಿ ಬೆಂಬಲವಾಗಿದ್ದಿರಬಹುದೆಂದು ಹೇಳಬಹುದು. ಪ್ರಭಾವತೀಗುಪ್ತೆಯು ಸನ್ನಿಧಾನದಿಂದ ವಾಕಾಟಕಮಂಡಲವನ್ನು ಆಳುತ್ತಿದ್ದಾಗ ಗುಪ್ತರು ಗುಜರಾತವನ್ನೂ ಕಾಠಿಯಾವಾಡವನ್ನೂ ಗೆದ್ದುಕೊಂಡರು. ತನ್ನ ತಂದೆಯಾದ ಮಹಾರಾಜಾಧಿರಾಜ ವಿಕ್ರಮಾದಿತ್ಯನಿಗೆ ಪ್ರಭಾವತಿಯು ಈ ದಿಗ್ವಿಜಯಗಳಲ್ಲಿ ಬೆಂಬಲವಾಗಿ ನಿಂತಳು.
ಮೂಲ: ಉಪಿಂದರ್ ಸಿಂಹ, ನೀಲಕಂಠ ಶಾಸ್ತ್ರಿ
“ಅಸಿತ್ ಕುಮಾರ್ ಹಾಲ್ದಾರ್ ರಚಿಸಿದ ಪ್ರಭಾವತಿಗುಪ್ತೆಯ ಚಿತ್ರಕಲೆ”
ದಾಕ್ಷಿಣಾತ್ಯಪ್ರಭುತ್ವಗಳಲ್ಲಿ ಮೊದಲನೆಯದಾದ ಸಾತವಾಹನವಂಶಕ್ಕೆ ಸಂಬಂಧಪಟ್ಟಿರುವುದು ಯಾವ ಭಾರತೀಯ ಕಾಲಗಣನೆಯ ಕ್ರಮ?
ಸಾತವಾಹನರ ಮೂಲಪುರುಷನಾದ ಗೌತಮೀಪುತ್ರ ಶಾತಕರ್ಣಿಯು ಕ್ಷತ್ತ್ರಪರೆಂದು ಹೆಸರಾಗಿದ್ದ ನಹಪಾನ ಮೊದಲಾದ ಶಕರ ದೊರೆಗಳನ್ನು ಮೆಟ್ಟಿದ್ದನೆಂದು ನಮಗೆ ತಿಳಿಯುತ್ತದೆ. ಕೆಲವರು ಈತನೇ ಶಾಲಿವಾಹನನೆಂದೂ ಇವನ ವಿಜಯದ ಸಲುವಾಗಿಯೇ ಆ ವರ್ಷದಿಂದೀಚೆಗೆ ಶಾಲಿವಾಹನಶಕೆ ಪ್ರತಿಷ್ಠಿತವಾಯಿತೆಂದೂ ಹೇಳುತ್ತಾರೆ. ಮತ್ತಿತರರು ಶಕಾಧಿಪತಿಗಳೇ ಈ ಶಕೆ ಎನ್ನುವ ವರ್ಷಗಣನಕ್ರಮಕ್ಕೆ ಸ್ಫೂರ್ತಿಯೆಂದೂ ಹೇಳುವುದುಂಟು. ಒಟ್ಟಿನಲ್ಲಿ ಶಕಕ್ರಮವು ಸಾಮಾನ್ಯಶಕೆ ೭೮ರಿಂದ ಪ್ರಾರಂಭವಾಯಿತು. ಪುರಾಣಗಳಲ್ಲಿ ದಕ್ಷಿಣಾಧೀಶ್ವರರಾದ ಸಾತವಾಹನರನ್ನು ಆಂಧ್ರರೆಂದು ಹೆಸರಿಸಲಾಗಿರುವುದು ನವೀನವಾದ ಸಂಗತಿ. ಮೌರ್ಯರ ಮತ್ತು ಶುಂಗರ ಕಾಲದಲ್ಲಿ ದಕ್ಷಿಣದ ಮಹಾಮಾಂಡಲಿಕರಾಗಿ ಸಾಮಂತರಾಗಿದ್ದ ಸಾತವಾಹನರು ಸಾಮಾನ್ಯಪೂರ್ವಶಕೆ ೧೦೦ರಿಂದ ಈಚೆಗೆ ಸ್ವಾತಂತ್ರ್ಯವನ್ನೊಪ್ಪಿದರು. ಮೂವತ್ತಕ್ಕೂ ಹೆಚ್ಚು ರಾಜರ ದಾಖಲೆಯಿರುವ ಈ ವಂಶವು ನಿಜವಾಗಿ ರಾಜ್ಯವಾಳಿದ್ದು ಮುನ್ನೂರು ವರ್ಷಗಳ ಕಾಲ. ಶಕರೊಂದಿಗೆ ಇವರು ಎಂದೆಂದಿಗೂ ಹೋರಾಡುತ್ತಲೇ ಇದ್ದರೂ ಇವರ ಅವಸಾನದ ಬಳಿಕವೂ ಶಕರು ಉಳಿದುಕೊಂಡಿದ್ದರು. ಶಕಾರಿಯೆಂದು ಬಿರುದು ಪಡೆದ ಗುಪ್ತರ ವಿಕ್ರಮಾದಿತ್ಯನೂ ಅವನ ಮೊಮ್ಮಗ ಸ್ಕಂದಗುಪ್ತನೂ ಅವರನ್ನು ಕೊನೆಗಾಣಿಸಿ ಭರತವರ್ಷದಿಂದ ನಿರ್ಣಾಮ ಮಾಡಿದರು. ಸಾತವಾಹನರ ಒಡೆತನದಲ್ಲಿ ಪಡುವಣ ಕರಾವಳಿಯು ವಾಣಿಜ್ಯಕೇಂದ್ರವಾಗಿ ಅಭಿವರ್ಧಿಸಿತು. ಚೌಲ, ಸೋಪಾರ, ಕಲ್ಯಾಣ, ಮತ್ತು ಘರಪುರಿಗಳನ್ನು ಕೊಂಕಣದ ತೀರದಲ್ಲಿನ ಮುಖ್ಯವಾದ ನೌಕಾನಿಃಸ್ಥಾನಗಳೆಂದು ಒಂದನೆಯ ಶತಮಾನದಲ್ಲಿ ರಚಿತವಾದ ಒಂದು ಮಿಸ್ರದ ಗ್ರಂಥ ದಾಖಲಿಸುತ್ತದೆ. ಸಾತವಾಹನರು ಮುಖ್ಯವಾಗಿ ಶೈವಾಗಮವನ್ನು ನಚ್ಚಿದವರಾದರೂ ಸಕಲಮತಗಳಿಗೆ ಒತ್ತಾಸೆಯಿತ್ತಿದ್ದರು. ಸಾತವಾಹನರ ಪ್ರತ್ನತಮವಾದ ಉಲ್ಲೇಖವು ಸ್ತೂಪವೊಂದರ ಮೇಲ್ಭಾಗದಲ್ಲಿ ಛಿಮುಕ ಸಾತವಾಹನನ ನಾಮಸ್ಮರಣೆಯೇ ಆಗಿರುವುದನ್ನು ಕಂಡಾಗ ಈ ಸಮನ್ವಯದೃಷ್ಟಿಯ ಸಾಕಲ್ಯ ನಮಗೆ ಗೋಚರವಾಗುತ್ತದೆ. ಕಾರ್ಲಾದಲ್ಲಿ ನೆಲೆಸಿರುವ ಬೌದ್ಧಗುಹೆಗಳೂ ಸಾತವಾಹನರ ಕಾಲದಲ್ಲಿಯೇ ಕೊರೆಯಲ್ಪಟ್ಟುವು. ಚಿತ್ರದಲ್ಲಿ ಕಾಣಸಿಗುವುದು ಪಾಂಡವ್ಲೇಣಿ ಎನ್ನುವ ನಾಸಿಕದ ಬಳಿಯ ಗುಹಾಯತನ; ಕಾಲ ಸುಮಾರು ಸಾಮಾನ್ಯಪೂರ್ವಶಕೆ ಇನ್ನೂರು.
ಮೂಲ: ಆರ್. ಸಿ. ಮಜುಮ್ದಾರ್ “Ancient India”, ಎ. ಎಸ್. ಅಟ್ಲೇಕರ್.
Restart quiz Exit
How did you like this quiz?
We will send you quiz links at 6 AM on festival days. Nothing else
Δ